ಕುಂದಗೋಳ

 ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ಮತ್ತು ಆ ತಾಲ್ಲೂಕಿನ ಮುಖ್ಯಸ್ಥಳ. ಹುಬ್ಬಳ್ಳಿ ತಾಲ್ಲೂಕಿನ ಆಗ್ನೇಯಕ್ಕಿದೆ. ತಾಲ್ಲೂಕಿನ ವಿಸ್ತೀರ್ಣ 608 ಚ. ಕಿಮೀ. ಜನಸಂಖ್ಯೆ 1,57,039 (2001). 1948ರಲ್ಲಿ ಇದು ಧಾರವಾಡ ಜಿಲ್ಲೆಯಲ್ಲಿ ಸಮಾವೇಶವಾಗುವ ಮೊದಲು ಜಮಖಂಡಿ ಸಂಸ್ಥಾನದ ಆಡಳಿತದಲ್ಲಿತ್ತು. ಇಲ್ಲಿಯದು ಶುಷ್ಕ ವಾಯುಗುಣ; ಕಪ್ಪುಮಿಶ್ರಿತ ಮಣ್ಣು. ತುಂಬ ಫಲವತ್ತಾಗಿದೆ. ಹತ್ತಿ ಮತ್ತು ಜೋಳ ಇಲ್ಲಿಯ ಮುಖ್ಯ ಬೆಳೆಗಳು. ಮಳೆ ಸಾಮಾನ್ಯವಾಗಿ 25"-30".

 ಮೊದಲು ಈ ತಾಲ್ಲೂಕಿನಲ್ಲಿದ್ದ ಹಳ್ಳಿಗಳ ಸಂಖ್ಯೆ 58. ಪ್ರಾದೇಶಿಕ ಬದಲಾವಣೆಗಳ ಅನಂತರ 51ಕ್ಕೆ ಇಳಿಯಿತು. ಪಟ್ಟಣವೆಂದರೆ ಕುಂದಗೋಳವೊಂದೇ. ಎರಡು ದೊಡ್ಡ ಪಂಚಾಯಿತೆ ಹಳ್ಳಿಗಳಿವೆ. ಉಳಿದವು ಕಿರಿಯವು.

 ತಾಲ್ಲೂಕಿನ ಮುಖ್ಯಸ್ಥಳವಾದ ಕುಂದಗೋಳ ಇತಿಹಾಸ ಪ್ರಸಿದ್ಧವಾದ್ದು. ಅದು ಮೊದಲು ಬ್ರಹ್ಮಪುರವಾಗಿದ್ದಿರಬೇಕೆಂದು ಸ್ಥಳಪುರಾಣದಿಂದ ವ್ಯಕ್ತವಾಗುತ್ತದೆ. ಹುಬ್ಬಳ್ಳಿಯಿಂದ ಆಗ್ನೇಯಕ್ಕೆ 9 ಮೈ. ಮೇಲಿರುವ ಈ ಪಟ್ಟಣ ಹುಬ್ಬಳ್ಳಿ-ಬೆಂಗಳೂರು ಮುಖ್ಯ ರೈಲುಮಾರ್ಗದ ಮೇಲಿದೆ. ಇಲ್ಲಿಯ ಪುರಸಭೆ ಹಳೆಯದು. 1877ರಲ್ಲಿ ಅದು ಸ್ಥಾಪಿತವಾಯಿತು. ಇಲ್ಲಿಯ ಶಂಭುಲಿಂಗ ದೇವಾಲಯ ಪ್ರಸಿದ್ಧವಾದ್ದು. ಇದು ಬಂಕಾಪುರ ಕೋಟೆಯಲ್ಲಿರುವ 60 ಕಂಬಗಳ ದೇವಾಲಯದ ಮಾದರಿಯಲ್ಲಿದೆ. ಚಾಳುಕ್ಯ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಮೂಲ ಗುಡಿಯ ಸಭಾಮಂಟಪ ಮತ್ತು ಗರ್ಭಗುಡಿಗಳು ಮಾತ್ರ ಉಳಿದಿವೆ. ಸಭಾಮಂಟಪದ ವೃತ್ತಿನಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವೂ ಮುಂಭಾಗದ ಕೋಣೆಯ ಎಡಬಲಗಳಲ್ಲಿ ಪಾರ್ವತಿ ವಿಘ್ನೇಶ್ವರರ ವಿಗ್ರಹಗಳೂ ಇವೆ. ದ್ವಾರದ ಮೇಲ್ಭಾಗದಲ್ಲಿ ಲಕ್ಷ್ಮಣ ರಾಮ ಸೀತೆಯರನ್ನು ಕೆತ್ತಲಾಗಿದೆ. ದೇವಾಲಯದ ಕೆಲಭಾಗದ ಜೀರ್ಣೊದ್ಧಾರವಾಗಿದೆ. ಬ್ರಹ್ಮದೇವರ ಗುಡಿ, ದತ್ತಾತ್ರೇಯಗುಡಿ, ಶಂಕರಾಚಾರ್ಯರ ಗುಡಿ ಹಾಗೂ ಮಲ್ಲಕಾರ್ಜುನ ಗುಡಿಗಳು ಇಲ್ಲಿಯ ಇತರ ದೇವಾಲಯಗಳು. ಇಲ್ಲಿ ಹನ್ನೊಂದು ಶಿಲಾಶಾಸನಗಳಿವೆ. 1040ರದು ಅತಿ ಹಳೆಯದು. ಈ ಶಿಲಾಶಾಸನಗಳು ಚಾಳುಕ್ಯ, ಕಳಚುರಿ ಮತ್ತು ವಿಜಯನಗರ ಕಾಲಗಳಿಗೆ ಸೇರಿದವು. ಜನಸಂಖ್ಯೆ 16,837 (2001).

 ಕುಂದಗೋಳ ಭಾರತದ ಸಂಗೀತ ನಕ್ಷೆಯಲ್ಲಿ ತನ್ನ ಹೆಸರನ್ನು ಮೂಡಿಸಿಕೊಂಡಿದೆ. ಸವಾಯಿಗಂಧರ್ವರು ಇಲ್ಲಿದ್ದಾಗ ಅವರು ಭೀಮಸೇನ ಜೋಶಿ ಮತ್ತು ಗಂಗೂಬಾಯಿಹಾನಗಲ್ಲರಂಥ ಅಖಿಲ ಭಾರತ ಖ್ಯಾತಿಯ ಶಿಷ್ಯರನ್ನು ತಯಾರಿಸಿದರು. ಸವಾಯಿಗಂಧರ್ವರ ಸಂಗೀತದಿಂದಾಗಿ ಕುಂದಗೋಳ ಪಟ್ಟಣ ಸಂಗೀತದ ನೆಲೆವೀಡಾಗಿ ಪರಿಣಮಿಸಿತು. ಇಲ್ಲಿಯ ನಾನಾಸಾಹೇಬ ನಾಡಗಿರರು ಅವರ ಶಿಷ್ಯರಲೊಬ್ಬರು. ಅವರೀಗ ತಮ್ಮ ಗುರುಗಳ ಪುಣ್ಯತಿಥಿಯಂದು ಕುಂದಗೋಳದಲ್ಲಿ ಸಂಗೀತ ಸಮಾರೋಹ ಜರುಗಿಸುತ್ತಾರೆ. ಭಾರತದ ನಾನಾ ಮೂಲೆಗಳಿಂದ ಬರುವ ಸಂಗೀತಗಾರರ ಕಾರ್ಯಕ್ರಮಗಳಿಂದ ಕೂಡಿದ ಈ ಸಂಗೀತಾರಾಧನೆ ಜನಾಕರ್ಷಕವಾಗಿ ಪರಿಣಮಿಸಿದೆ.

 ಇಲ್ಲಿ ದೊಡ್ಡಕೈಗಾರಿಕೆ ಯಾವುದೂ ಇಲ್ಲ. ಹತ್ತಿ ಎಕ್ಕುವ ಒಂದು ಕಾರ್ಖಾನೆಯಿದೆ. ಕೃಷಿಯೇ ಮುಖ್ಯ ಕಸಬು.

 

(ಎಸ್.ವಿ.ಪಿ.ಎ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ